ನೈಸರ್ಗಿಕ ಸಂಪನ್ಮೂಲಗಳನ್ನು ತೊರೆದ ಬೆಂಗಳೂರಿನ ಆಧುನಿಕತೆ - ವಾಸಯೋಗ್ಯವೇ?

ರಾಮಚಂದ್ರ ಟಿ.ವಿ.* ಭರತ್ ಎಚ್. ಐತಾಳ್,  ವಿನಯ್. ಎಸ್.,  ಗಣೇಶ ಹೆಗಡೆ

ಇಂಧನ ಮತ್ತು ಜೌಗುಭೂಮಿ ಸಂಶೋಧನಾ ವಿಭಾಗ (EWRG), ಪರಿಸರ ವಿಜ್ಞಾನ ಕೇಂದ್ರ [CES],
ಭಾರತೀಯ ವಿಜ್ಞಾನ ಮಂದಿರ, ಬೆಂಗಳೂರು, ಕರ್ನಾಟಕ, 560 012, ಭಾರತ
*ಮಿಂಚಂಚೆ: cestvr@ces.iisc.ernet.in
ಜಾಲತಾಣ: http://ces.iisc.ernet.in/energy; http://ces.iisc.ernet.in/foss
ದೂರವಾಣಿ: 080-22933099/22933503 (ವಿಸ್ತಾರ 107)

ಪ್ರಸ್ತಾವನೆ.

"ಬೆಂಗಳೂರು" ಎಂಬ ಹೆಸರು, "ಬೆಂಗ"-ಪ್ಟರೋಕಾರ್ಪಸ್ ಮಾರ್ಸುಪಿಯಮ್ ಎಂಬ ಎಲೆಯುದುರುವ ಕಾಡಿನ ಮರ ಪ್ರಭೇದದ ಸ್ಥಳೀಯ ಹೆಸರು ಹಾಗೂ "ಊರು" ಎಂದರೆ ಹಳ್ಳಿ ಅಥವಾ ಪಟ್ಟಣ ಇವೆರಡರ ಸಂಯೋಗದಿದಂದ ಬಂದಿರುವುದಾಗಿದೆ. ಸಂಪದ್ಭರಿತವಾದ ಕಾಡು, ಪ್ರಾಣಿ ಸಂಕುಲ ಹಾಗೂ ರಾಷ್ಟ್ರಮಟ್ಟದಲ್ಲಿ ಮಾನ್ಯತೆ ಪಡೆದ ಲಾಲಬಾಗ್ ಮತ್ತು ಕಬ್ಬನ್ ಪಾರ್ಕ್ ಸಸ್ಯೋದ್ಯಾನಗಳನ್ನು ಹೊಂದಿದ್ದ ಬೆಂಗಳೂರು, "ಭಾರತದ ಉದ್ಯಾನ ನಗರ" ಎಂದೇ ಪ್ರಸಿದ್ಧವಾಗಿದೆ. ಪ್ರಸ್ತುತ ಬೆಂಗಳೂರು 5ನೇ ಅತಿದೊಡ್ಡ ಮಹಾನಗರ ಹಾಗೂ ಅತೀ ವೇಗವಾಗಿ ಬಳೆಯುತ್ತಿರುವ ಮಹಾನಗರಗಳಲ್ಲಿ 2ನೇಯದು. ಬೆಂಗಳೂರಿನ ಮರಗಳು ಒಣ ಎಲೆ ಉದುರುವ ಕಾಡಿನ (ಖಿeಡಿmiಟಿಚಿಟiಚಿ-ಂಟಿogeissus ಟಚಿಣiಜಿoಟiಚಿ-ಖಿeಛಿಣoಟಿಚಿ) ಜಾತಿಗೆ ಸೇರಿವೆ. ನಗರವು ವರ್ಷಪೂರ್ತಿ ಹಿತವಾದ ಸೌಮ್ಯ ವಾತಾವರಣವನ್ನು ಅನುಭವಿಸುತ್ತದೆ.

17ನೇ ಶತಮಾನದ ಆರಂಭದಲ್ಲಿ, ದಟ್ಟವಾದ ಗಿಡಗಂಟಿಗಳಿಂದ ತುಂಬಿದ್ದ, ಅರಣ್ಯಾವೃತವಾಗಿದ್ದ ಬೆಂಗಳೂರನ್ನು, ಮೈಸೂರು ಪ್ರಾಂತದ ದೊರೆ ಹೈದರ ಅಲಿಯು ‘ನಗರ' ಪ್ರದೇಶವೆಂದು ಘೋಷಿಸಿದನು. ಇವನ ಆಡಳಿತದಲ್ಲೇ ಸುಮಾರು 100 ಹೆಕ್ಟೇರ್ ವಿಸ್ತೀರ್ಣದಲ್ಲಿ ಲಾಲಬಾಗ್ ಸಸ್ಯೋದ್ಯಾನವು ಸ್ಥಾಪಿಸಲ್ಪಟ್ಟತು. ಈ ಎಲ್ಲ ಕಾರಣಗಳಿಂದ ಬೆಂಗಳೂರು "ಉದ್ಯಾನ ನಗರಿ" ಎಂದು ನಾಮಾಂಕಿತವಾಯಿತು. ನಂತರ 1831ರಲ್ಲಿ, ಬ್ರಿಟಿಷ್ ಆಡಳಿತಾಧಿಕಾರಿಗಳು "ಕಬ್ಬನ್ ಪಾರ್ಕ್"ನ್ನು ಸಹ ನಿರ್ಮಿಸಿ ನಗರದ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಿದರು.

ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಸಾರ್ವಜನಿಕ ಜಾಗಗಳನ್ನು ವ್ಯವಸ್ಥಿತವಾಗಿ ಬಳಸಿಕೊಳ್ಳುವ ಉದ್ದೇಶದಿಂದ ‘ಉದ್ಯಾನವನ'ಗಳನ್ನು ನಿರ್ಮಿಸುವ ಸಂಸ್ಕøತಿಯನ್ನು ಪರಿಚಯಿಸಲಾಯಿತು. ನಿಧಾನವಾಗಿ ಇದು, ಮೇಲ್ವರ್ಗದ ಹಾಗೂ ವಿದ್ಯಾವಂತ ಸಮುದಾಯದಲ್ಲಿ ಹಾಸುಹೊಕ್ಕಾಯಿತು. ಉದಾಹರಣೆಗೆ, ನಗರದ ಅತ್ಯಂತ ಹಳೆಯ ಪ್ರದೇಶಗಳಲ್ಲೊಂದಾದ ಮಲ್ಲೇಶ್ವರಮ್, ಉದ್ಯಾನವನಗಳನ್ನು ನಿರ್ಮಿಸುವ ಸಂಸ್ಕøತಿಯನ್ನು ಬಹುಬೇಗ ಅಳವಡಿಸಿಕೊಂಡಿತು ಅಲ್ಲದೇ, ಭಾರತೀಯ ಸಂಪ್ರದಾಯಗಳೊಂದಿಗೆ ಹೊಂದಿಸಿಕೊಂಡಿತು. ಇಲ್ಲಿ ಜನರು, ಹಣ್ಣು ಮತ್ತು ತರಕಾರಿಗಳನ್ನು ತಮ್ಮ ಮನೆಯ ಉದ್ಯಾನಗಳಲ್ಲಿ ಬೆಳೆದರು ಹಾಗೂ ರಸ್ತೆಯ ಇಕ್ಕೆಲಗಳಲ್ಲಿ ಮರಗಳನ್ನೂ ಸಹ ಬೆಳೆಸಿದರು. ‘ಸಂಪಿಗೆ’ ರಸ್ತೆ ಮತ್ತು ‘ಮಾರ್ಗೋಸಾ’ ರಸ್ತೆಗಳು ಇದಕ್ಕೆ ಜೀವಂತ ನಿದರ್ಶನಗಳಾಗಿವೆ.

ಸುಮಾರು 1965ರ ಹೊತ್ತಿಗೆ ಸಣ್ಣ-ಕೈಗಾರಿಕೆಗಳು, ಉದ್ಯಮಗಳು ಬೆಂಗಳೂರಿಗೆ ಲಗ್ಗೆಯಿಟ್ಟವು. ಸುಮಾರು 3 ದಶಕಗಳ ಕೈಗಾರಿಕೀಕರಣಕ್ಕೆ ಸಾಕ್ಷಿಯಾದ ಉದ್ಯಾನ ನಗರಿಯನ್ನು 21ನೇ ಶತಮಾನದ ಆರಂಭದಲ್ಲಿ (1998ರಿಂದ) ‘ಮಾಹಿತಿ ತಂತ್ರಜ್ಞಾನ’ ವಲಯ ಸಂಪೂರ್ಣವಾಗಿ ಮುತ್ತಿಕೊಂಡಿತು. ಈಗ ಬೆಂಗಳೂರು ಸಿಲಿಕಾನ್ ನಗರಿ, ಮಾಹಿತಿ ತಂತ್ರಜ್ಞಾನದ ತೊಟ್ಟಿಲು. ಲೆಕ್ಕಕ್ಕೆ ನಿಲುಕದಷ್ಟು ವ್ಯಾಪಾರಿಕ, ಔದ್ಯೋಗಿಕ, ಶೈಕ್ಷಣಿಕ ಸಂಸ್ಥೆಗಳಿಗೆ ಹಾಗೂ ಬಟ್ಟೆ ತಯಾರಿಕೆ, ವಾಯುಯಾನ, ಬಾಹ್ಯಾಕಾಶ, ಜೈವಿಕ ಮತ್ತು ಮಾಹಿತಿ ತಂತ್ರಜ್ಞಾನ ಕೈಗಾರಿಕೆಗಳಿಗೆ ಈ ನಗರ ಆಶ್ರಯ ನೀಡಿದೆ. ಈ ಅನಿರೀಕ್ಷಿತ ಬೆಳವಣಿಗೆಯು ಮೂಲಭೂತ ಅಗತ್ಯಗಳಾದ ನೀರು, ಇಂಧನ, ಸಾರ್ವಜನಿಕ ಸಂಚಾರ, ಭೂ ಅವಶ್ಯಕತೆಗಳ ಮೇಲೆ ತ್ವರಿತ ಮತ್ತು ತೀಕ್ಷ್ಣ ಒತ್ತಡವನ್ನುಂಟುಮಾಡಿದವು. ವಿಶಾಲವಾದ ಉದ್ಯಾನಗಳು ಮತ್ತು ಬ್ರಿಟಿಷರ ಬಂಗಲೆಗಳು ತಮ್ಮ ಅಸ್ತಿತ್ವವನ್ನು ಕಳೆದುಕೊಂಡು ಬಹುಮಹಡಿ ಕಟ್ಟಡಗಳಾದವು. ಬ್ರಹತ್ ಉದ್ಯಾನವನಗಳು ಮನೆಯ ಮುಂದಿನ ಅಥವಾ ಬಾಲ್ಕನಿಯ ಹುಲ್ಲುಹಾಸುಗಳಾಗಿ ರೂಪಾಂತರಗೊಂಡವು. ಬೆಂಗಳೂರು, 133 ಕುಟುಂಬದ, 542 ಜಾತಿಯ, 979 ಪ್ರಭೇದದ ನೈಸರ್ಗಿಕ ವನ್ಯಸಂಪತ್ತನ್ನು ಹೊಂದಿತ್ತು. ಅಯೋಜಿತ ಹಾಗೂ ಅನಿಯಂತ್ರಿತ ನಗರೀಕರಣದಿಂದ ಬೆಂಗಳೂರಿನ ವಿಸ್ತೀರ್ಣ ಸ್ವಾತಂತ್ರ್ಯಾನಂತರ 69 ಚ.ಕೀ.ಮೀ.ಯಿಂದ 741 ಚ.ಕೀ.ಮೀ.ಗೆ ಏರಿಕೆಯಾಯಿತು. ಪ್ರಸ್ತುತ ಬೆಂಗಳೂರು ಬಹುತೇಕ ಉದ್ಯಾನವನ ಮತ್ತು ಜಲಾಶಯಗಳನ್ನು ಕಳೆದುಕೊಳ್ಳುತ್ತಿದ್ದು, ಕೇವಲ ಭೌತಿಕ, ಕೃತಕ, ಮಾನವ ನಿರ್ಮಿತ ಕಟ್ಟಡಗಳ/ವಸ್ತುಗಳ ಆಗರವಾಗುತ್ತದೆ. ಬೆಂಗಳೂರು ಪರ್ವತ ಶ್ರೇಣಿಗಳಲ್ಲಿದ್ದು ಪ್ರಮುಖವಾಗಿ 3 ಜಲ ಕಣಿವೆಗಳನ್ನು ಹೊಂದಿದೆ: ವೃಷಭಾವತಿ, ಕೋರಮಂಗಲ-ಚಲ್ಲಘಟ್ಟ ಮತ್ತು ಹೆಬ್ಬಾಳ-ನಾಗವಾರ (ಚಿತ್ರ 5). ಅರ್ಕಾವತಿ, ಪಿನಾಕಿನಿ ಮತ್ತು ಶಿಂಷಾ ತೊರೆಗಳ ಮೂಲಕ ನೀರು ಹರಿದು ಕಾವೇರಿ ನದಿಯನ್ನು ಸೇರುತ್ತದೆ. ನಗರದ ಮಧ್ಯ, ಪೂರ್ವ ಮತ್ತು ಉತ್ತರ ಭಾಗಗಳು ಏರು-ತಗ್ಗುಗಳಿಂದ ಕೂಡಿದ್ದು, ಎತ್ತರದ ಪ್ರದೇಶಗಳು ಪೊದೆಗಳಿಂದಾವೃತವಾಗಿವೆ. ತಗ್ಗು ಪ್ರದೇಶಗಳಲ್ಲಿ ನೀರಾವರಿಯ ಅನುಕೂಲಕ್ಕೆ ಕಾಲುವೆಗಳಿಗೆ ಅಡ್ಡವಾಗಿ ಕಟ್ಟುಗಳನ್ನು ನಿರ್ಮಿಸಿ ವಿವಿಧ ಅಕಾರ ಹಾಗೂ ಸಾಮಥ್ರ್ಯದ ನೀರಿನ ಸಂಗ್ರಹಾಗಾರಗಳನ್ನು ರಚಿಸಲಾಗಿದೆ. ನಗರದ ದಕ್ಷಿಣ ಭಾಗವು ಗುಡ್ಡಗಾಡು ಪ್ರದೇಶವಾಗಿದ್ದು, ಪೊದೆಗಳು ಮತ್ತು ಅರಣ್ಯಗಳಿಂದ ಸುತ್ತುವರಿದಿದೆ. ಭೌಗೋಳಿಕವಾಗಿ ಈ ಪ್ರದೇಶವು ಹೆಚ್ಚಾಗಿ ಬೆಣಚು ಕಲ್ಲು ಹಾಗೂ ಗ್ನೇಯ್ಸಸ್ ಎಂಬ ವರ್ಗದ ಕಲ್ಲುಗಳಿಂದ ಕೂಡಿದ್ದು, ಡೈಕ್ಸ್, ಡೊಲೆರಿಟಸ್ ಮುಂತಾದ ಕಲ್ಲುಗಳನ್ನೂ ಸಹ ಕಾಣಬಹುದು.

ಬಹುಮಹಡಿ ಕಾಂಕ್ರೀಟ್ ಕಟ್ಟಡಗಳೇ ಕಾಣಸಿಗುವ ನಗರ ಪ್ರದೇಶಗಳಲ್ಲಿ, ಉದ್ಯಾನವನಗಳು, ಸಾಲು ಮರಗಳು ಮತ್ತು ಮನೆಯ ಹಿಂಭಾಗಗಳಲ್ಲಿ ವಿರಳವಾದ ಮರಗಳು, ಪೊದೆಗಳು ಹಾಗೂ ಔಷಧೀಯ ಸಸ್ಯಗಳನ್ನು ಕಾಣಬಹುದು. ನಗರದ ಹಸಿರು ಪ್ರದೇಶಗಳು ವಾತಾವರಣದಲ್ಲಿನ (ಹಸಿರು ಮನೆ ಅನಿಲ) ಇಂಗಾಲವನ್ನು ಕ್ರೋಢೀಕರಿಸುವುದಲ್ಲದೇ ಸೂಕ್ಷ್ಮ ವಾತಾವರಣದ ಸಮತೋಲನ ಕಾಪಾಡುವಲ್ಲಿ ಅತಿ ಮುಖ್ಯ ಪಾತ್ರ ವಹಿಸುತ್ತವೆ. ಮರಗಳು ಹೆಚ್ಚಿನ ಪ್ರಮಾಣದ ನೀರು ಭೂಮಿಯಲ್ಲಿ ಇಂಗುವಂತೆ ಮಾಡುವುದರ ಮೂಲಕ, ಅಂತರ್ಜಲದ ಮಟ್ಟವನ್ನು ಕಾಪಾಡುತ್ತವೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ನಗರ ಪ್ರದೇಶದಲ್ಲಿ ಪ್ರತೀ ವ್ಯಕ್ತಿಯ ಅಮ್ಲಜನಕ ಹಾಗೂ ಇತರ ಅರಣ್ಯಾಧಾರಿತ ಸೇವೆಗಳನ್ನು ಪೂರೈಸಲು ಕನಿಷ್ಠ 9.5 ಚ.ಮೀ. ಹಸಿರು ವಲಯದ ಅಗತ್ಯವಿದೆ. ಒಂದು ಅಂದಾಜಿನ ಪ್ರಕಾರ 1 ಹೆಕ್ಟೇರ್ ಅರಣ್ಯವು ಒಂದು ವರ್ಷಕ್ಕೆ ಸುಮಾರು 6 ಟನ್‍ಗಳಷ್ಟು ಇಂಗಾಲವನ್ನು ಸಂಗ್ರಹಿಸಬಲ್ಲದು, ಅಂದರೆ ಪ್ರತೀ ಮರ ವರ್ಷಕ್ಕೆ 6 ಕಿ.ಗ್ರಾಂ.ನಷ್ಟು ಇಂಗಾಲ ಸಂಗ್ರಹ ಮಾಡುವ ಸಾಮಥ್ರ್ಯ ಹೊಂದಿದೆ. ಸಾಮಾನ್ಯವಾಗಿ ಪ್ರತೀ ಮನುಷ್ಯ ವರ್ಷಕ್ಕೆ 192ರಿಂದ 328 ಕಿ.ಗ್ರಾಂ.ನಷ್ಟು ಇಂಗಾಲವನ್ನು ಕೇವಲ ಉಸಿರಾಟದ ಮೂಲಕ ಬಿಡುಗಡೆ ಮಾಡುತ್ತಾನೆ. ಅಂದರೆ, ಉಸಿರಾಟದಿಂದ ಬಿಡುಗಡೆಯಾದ ಇಂಗಾಲವನ್ನು ಮಿತಗೊಳಿಸಲು ಪ್ರತೀ ವ್ಯಕ್ತಿಗೆ ಸುಮಾರು 32ರಿಂದ 55 ಮರಗಳ ಅವಶ್ಯಕತೆಯಿದೆ.

ಮರದ ನೆರಳಿನಿಂದ ಸೂರ್ಯನ ಶಾಖದ ಹೀರುವಿಕೆ ತಗ್ಗುತ್ತದೆ ಹಾಗೂ ಕಟ್ಟಡಗಳು ತಂಪಾಗಿರಲು ಸಾಧ್ಯ ಮತ್ತು ಇದು ವಾತಾವರಣದ ಜೊತೆಗಿನ ದೀರ್ಘತರಂಗ ವಿನಿಮಯವನ್ನು ಸಹ ತಗ್ಗಿಸುತ್ತದೆ. ಎಲೆಗಳ ಭಾಷ್ಪೀಕರಣದಿಂದ ವಾತಾವರಣಕ್ಕೆ ನೀರಾವಿಯು ಬಿಡುಗಡೆಯಾಗುತ್ತದೆ ಹಾಗೂ ಗಾಳಿಯಲ್ಲಿನ ಆದ್ರ್ರತೆ ಹೆಚ್ಚುತ್ತದೆ. ಹಸಿರು ಹೊದಿಕೆ ಶೇ. 30ರಷ್ಟು ಮಳೆಯ ನೀರನ್ನು ಎಲೆಗಳ ಮೂಲಕ ಭಾಷ್ಪೀಕರಣದಿಂದ ವಾತಾವರಣಕ್ಕೆ ಬಿಡುಗಡೆ ಮಾಡುವ ಮೂಲಕ ಜಲಚಕ್ರದಲ್ಲಿ ಮಹತ್ತರ ಪಾತ್ರವಹಿಸಿತ್ತದೆ. ಮಳೆ ನೀರಿನ ಬಹುಪಾಲು, ಬೇರುಗಳ ಮೂಲಕ ಅಂತರ್ಜಲವನ್ನು ಸೇರುತ್ತದೆ ಮತ್ತು ಅಲ್ಲಿ ಸಂಗ್ರಹಿಸಲ್ಪಡುತ್ತದೆ. ಹೀಗೆ ಅರಣ್ಯವು ಪ್ರವಾಹ ಮತ್ತು ಭೂಕುಸಿತವನ್ನು ತಡೆಗಟ್ಟುತ್ತದೆ. ನಗರದಲ್ಲಿ ವಾತಾವರಣದ ತಂಪನ್ನು ಕಾಯ್ದುಕೊಳ್ಳುವ ಸಾಮಥ್ರ್ಯವು ಕಾಡಿನ ಮರಗಳ ಪ್ರಭೇದ ಹಾಗೂ ವಿಸ್ತಾರವನ್ನು ಅವಲಂಬಿತವಾಗಿದೆ. ಎಲೆಯ ತಾಪಮಾನ ಅದರ ಪ್ರಾಕೃತಿಕ ರಚನೆ ಮತ್ತು ಆಕಾರವನ್ನು ಅವಲಂಬಿಸಿದೆ. ಹಲವಾರು ಅಧ್ಯಯನಗಳು ವಾತಾವರಣದ ತಂಪನ್ನು ಕಾಯ್ದುಕೊಳ್ಳುವ ಮರಗಳ ಗುಣವನ್ನು ಸಮರ್ಥಿಸಿವೆ. ನಗರ ಪ್ರದೇಶ ಗ್ರಾಮೀಣ ಪ್ರದೇಶಕ್ಕಿಂತ ಸುಮಾರು 2.5○ ಸೆ.ನಷ್ಟು ಹೆಚ್ಚಿನ ಉಷ್ಣಾಂಶ ಹೊಂದಿರುತ್ತದೆ ಹಾಗೂ ನಗರದ ನೆರಳು ರಹಿತ ನಿವೇಶನ, ನೆರಳಿನಲ್ಲಿರುವ ನಿವೇಶನಕ್ಕಿಂತ 1○ ಸೆ.ನಷ್ಟು ಹೆಚ್ಚಿನ ಉಷ್ಣಾಂಶ ಹೊಂದಿರುತ್ತದೆ ಎಂಬುದು ವೈಜ್ಞಾನಿಕ ಅಧ್ಯಯನಗಳಲ್ಲಿ ದಾಖಲಾಗಿದೆ.

ವಾತಾವರಣದ ತಾಪಮಾನವನ್ನು ಕಾಪಾಡುವ ಸಾಮಥ್ರ್ಯ ಎಲ್ಲಾ ಮರ ಪ್ರಭೇದಗಳಲ್ಲಿ ಒಂದೇ ತೆರನಾಗಿರುವುದಿಲ್ಲ, ಇದು ಮರದ ಆಕಾರ, ಗಾತ್ರ ಹಾಗೂ ಆವರಿಸಿರುವ ಹಸಿರು ಮೇಲ್ಛಾವಣಿಯನ್ನು ಅವಲಂಬಿಸಿರುತ್ತದೆ. ವಿಶ್ವ ಆರೋಗ್ಯ ಸಂಸ್ಥೆ ಅರಣ್ಯದ ಸೇವೆಗಳು (ಅಮ್ಲಜನಕ, ಸೂಕ್ಷ್ಮ ವಾತಾವರಣದ ಸಮತೋಲನ) ಹಾಗೂ ಉತ್ಪನ್ನಗಳನ್ನು (ಉರುವಲು, ಎಲೆಗಳು) ಪರಿಗಣಿಸಿ, ಪ್ರತೀ ವ್ಯಕ್ತಿಗೆ ಕನಿಷ್ಠ 9.5 ಚ.ಮೀ.ನಷ್ಟು ಹಸಿರು ಪ್ರದೇಶವಿರಬೇಕು ಎಂದು ಶಿಫಾರಸ್ಸು ಮಾಡಿದೆ. ಮರಗಳು ಅಸಂಖ್ಯ ಪ್ರಾಣಿ-ಪಕ್ಷಿಗಳಿಗೆ ಮತ್ತು ಕೀಟಾದಿಗಳಿಗೆ ಆಹಾರ ಹಾಗೂ ಆಶ್ರಯವನ್ನು ಒದಗಿಸುತ್ತವೆ. ಅಲ್ಲದೇ ಮರಗಳು ವಿವಿಧ ಬಣ್ಣದ ಹೂವುಗಳಿಂದ ಆ ಪ್ರದೇಶವನ್ನು ನಯನ ಮನೋಹರವಾಗಿಸುತ್ತವೆ.

ಕೈಗಾರಿಕೀಕರಣ, ಅರಣ್ಯ ನಾಶ ಮತ್ತಿತರ ಮಾನವೀಯ ಚಟುವಟಿಕೆಗಳು, ಹಸಿರು ಮನೆ ಅನಿಲಗಳಾದ ಗಂಧಕದ ಡೈ ಆಕ್ಸೈಡ್, ಸಾರಜನಕದ ಆಕ್ಸೈಡ್‍ಗಳು, ಮೀಥೇನ್, ಇಂಗಾಲದ ಡೈ ಆಕ್ಸೈಡ್‍ಗಳ ಹೆಚ್ಚುವಿಕೆಗೆ ಕಾರಣವಾಗಿವೆ. ಸಾಂಪ್ರದಾಯಿಕ ಇಂಧನಗಳು ಸುಮಾರು ಶೇ.75ರಷ್ಟು ಇಂಗಾಲದ ಡೈ ಆಕ್ಸೈಡ್ ಬಿಡುಗಡೆಗೆ ಕಾರಣವಾಗಿವೆ ಹಾಗೂ ಕಳೆದ 20 ವರ್ಷದಲ್ಲಿ ವಾತಾವರಣದಲ್ಲಿ ಇಂಗಾಲದ ಡೈ ಆಕ್ಸೈಡ್ ಪ್ರಮಾಣ 280 ಪಿ.ಪಿ.ಎಂ.ನಿಂದ 382 ಪಿ.ಪಿ.ಎಂ.ಗೆ ಏರಿಕೆಯಾಗಿದೆ ಮತ್ತು 2011ರಲ್ಲಿ ಇದರ ಪ್ರಮಾಣ 390 ಪಿ.ಪಿ.ಎಂ.ರಷ್ಟಿದೆ. ಇದು ಕೆಲವು ನಿರ್ದಿಷ್ಟ ವಿದ್ಯುತ್ಕಾಂತೀಯ ತರಂಗಗಳನ್ನು ವಾತಾವರಣದಲ್ಲಿಯೇ ಹಿಡಿದಿಟ್ಟುಕೊಳ್ಳುವುದರಿಂದ ತಾಪಮಾನದಲ್ಲಿ ಏರಿಕೆ ಉಂಟಾಗುತ್ತದೆ. ಮರ ಮತ್ತು ಮಣ್ಣು ನಗರ ಪ್ರದೇಶಗಳಲ್ಲಿ ಇಂಗಾಲದ ಡೈ ಆಕ್ಸೈಡ್‍ನ್ನು ಹಿಡಿದಿಟ್ಟುಕೊಂಡು ಉಷ್ಣಾಂಶವನ್ನು ಕಾಯ್ದುಕೊಳ್ಳುತ್ತವೆ.

ಪ್ರಸ್ತುತ ಇರುವ ಮರಗಳನ್ನು ಎಣಿಕೆ ಮಾಡಲು ಸಾಂಪ್ರದಾಯಿಕ ವಿಧಾನಗಳಲ್ಲಿ ಅಧಿಕ ಸಮಯ ಮತ್ತು ಮಾನವ ಸಂಪನ್ಮೂಲಗಳ ಅಗತ್ಯವಿದೆ ಮತ್ತು ಅನಿರ್ದಿಷ್ಟ ದೋಷಗಳು ಒಳಗೊಳ್ಳುವ ಸಾಧ್ಯತೆಯಿದೆ. ದೂರ ಸಂವೇದಿ ಮಾಹಿತಿ ಮತ್ತು ಭೂ ಮಾಹಿತಿ ತಂತ್ರಜ್ಞಾನದಿಂದ ನಿಷ್ಪಕ್ಷಪಾತ ಹಾಗೂ ದೋಷರಹಿತ ಅಂಕಿ-ಅಂಶಗಳು ಲಭ್ಯವಿದೆ. ಪ್ರಾದೇಶಿಕ ಅಂಕಿ-ಅಂಶವು ವಿವಿಧ ಭೂ ವೈಶಿಷ್ಟ್ಯ ಹಾಗೂ ರಚನೆಯ ಮಾಹಿತಿಯನ್ನು ಹೊಂದಿರುತ್ತದೆ. ಇದು ಬಹು-ದೃಶ್ಯ ಮಾಹಿತಿ (ಮಲ್ಟಿ ರೆಸೊಲ್ಯೂಷನ್) ದೂರ ಸಂವೇದಿ ಅಂಕಿ-ಅಂಶಗಳಲ್ಲಿ ಸರೆಹಿಡಿಯಲ್ಪಟ್ಟಿದೆ. ಪ್ಯಾನ್‍ಕ್ರೋಮ್ಯಾಟಿಕ್ ಮತ್ತು ಮಲ್ಟಿಸ್ಪೆಕ್ಟ್ರಲ್ ಸಂವೇದಕಗಳಿಂದ ದೊರೆತ ಪ್ರಾದೇಶಿಕ ಚಿತ್ರ ಮಾಹಿತಿಯನ್ನು, ಸಮ್ಮಿಳನ ತಂತ್ರಜ್ಞಾನದ ಮೂಲಕ ಸಂಸ್ಕರಿಸಬಹುದು. ಈ ತಂತ್ರಜ್ಞಾನವನ್ನು ಪ್ರತ್ಯೇಕ ಪಿಕ್ಸೆಲ್, ರಚನೆ (ಚಹರೆ) ಅಥವಾ ಮಾಹಿತಿಯ ಪೂರ್ಣ ನಿರ್ಧರಿಸುವಿಕೆಯಲ್ಲಿಯೂ ಬಳಸಬಹುದು.

ಪ್ರಸ್ತುತ ಅಧ್ಯಯನದಲ್ಲಿ ಬೃಹತ್ ಬೆಂಗಳೂರಿನ ಬಹು-ದೃಶ್ಯ ಮಾಹಿತಿ (ಮಲ್ಟಿ-ರೆಸೊಲ್ಯೂಷನ್) ಅಂಕಿ-ಅಂಶಗಳನ್ನು ವಿಶ್ಲೇಷಿಸಲಾಗಿದೆ. ಸಮ್ಮಿಳನ ತಂತ್ರಜ್ಞಾನವು ಕಡಿಮೆ ಭೂ ದೃಶ್ಯ ಮಾಹಿತಿಯ ಮಲ್ಟಿಸ್ಪೆಕ್ಟ್ರಲ್ ಚಿತ್ರವನ್ನು ಅಧಿಕ ಭೂ ದೃಶ್ಯ ಮಾಹಿತಿಯ ಪ್ಯಾನ್‍ಕ್ರೋಮ್ಯಾಟಿಕ್ ಹೊಂದಿಸಲು ಸಹಾಯಕವಾಗಿದೆ. ನಗರ ಪ್ರದೇಶದ ಮೇಲ್ಮೈ ವೈಶಿಷ್ಟ್ಯಗಳನ್ನು ಕೇವಲ ಅವುಗಳ ಚಹರೆಯಿಂದಷ್ಟೆ ಅಲ್ಲದೇ, ರಚನೆಗಳನ್ನಾಧರಿಸಿಯೂ ಗುರುತಿಸಬಹುದು. ಈ ನಿಟ್ಟಿನಲ್ಲಿ ಬಹು-ದೃಶ್ಯ ಮಾಹಿತಿ (ಮಲ್ಟಿ-ರೆಸೊಲ್ಯೂಷನ್) ಚಿತ್ರ ಸಮ್ಮಿಳನ ತಂತ್ರಜ್ಞಾನವು ಪರಿಣಾಮಕಾರಿಯಾಗಿದೆ. ಪ್ರಸ್ತುತ ಬೃಹತ್ ಬೆಂಗಳೂರಿನಲ್ಲಿರುವ ಹಸಿರು ಪ್ರದೇಶವನ್ನು ಗರುತಿಸಿ, ದಾಖಲಿಸುವುದು ಈ ಅಧ್ಯಯನದ ಪ್ರುಮುಖ ಉದ್ದೇಶವಾಗಿದೆ. ಇದು (1) ಪ್ರತೀ ವಾರ್ಡ್‍ನಲ್ಲಿರುವ ಮರಗಳನ್ನು ಪತ್ತೆಹಚ್ಚುವುದು (2) ಜನ ಸಾಂದ್ರತೆ, ಪ್ರತೀ ವ್ಯಕ್ತಿಗೆ ಲಭ್ಯವಿರುವ ಮರಗಳು, ಮುಂತಾದ ಕೋಷ್ಟಕಗಳನ್ನು ಗುಣಿಸುವುದನ್ನು ಒಳಗೊಂಡಿದೆ.